ಜೂನ್ ತಿಂಗಳ ಮೊದಲ ವೀಕೆಂಡ್. ಏನ್ ಮಾಡಬೇಕು ಅಂತ ಈಗ್ಲೇ ಯೋಚನೆ ಮಾಡ್ತಿದ್ರೆ ಇಲ್ಲಿಗೆ ನಿಲ್ಲಿಸಿ. ರವೀಂದ್ರ ಕಲಾಕ್ಷೇತ್ರದ ಕಡೆ ಹೆಜ್ಜೆ ಹಾಕಿ. ನಿಮಗಾಗಿ ತಾಳಮದ್ದಳೆ ಪ್ರಿಯ ಸಂಘಟಕರು ಒಂದೊಳ್ಳೆ ತಾಳಮದ್ದಳೆಯನ್ನ ಸಂಯೋಜಿಸಿದ್ದಾರೆ. ಎರಡು ಪ್ರಸಂಗಗಳು, ತಾಳಮದ್ದಳೆ ಕ್ಷೇತ್ರದ ದಿಗ್ಗಜರೇ ನಡೆಸಿಕೊಡುತ್ತಿದ್ದಾರೆ. ಅದಕ್ಕೆ ಸಾಥ್ ಕೊಡಲು ತೆಂಕು ಬಡಗಿನ ಹಿಮ್ಮೇಳ.

ಮೊದಲ ಪ್ರಸಂಗ ಕರ್ಣಬೇಧನ:

ಭಾವನಾತ್ಮಕ ಪಾತ್ರಗಳಿಗೆ ತನ್ನದೇ ರೀತಿಯಲ್ಲಿ ಜೀವ ತುಂಬುವ ಶ್ರೀ ಸಂಕದಗುಂಡಿ ಗಣಪತಿ ಭಟ್ ಕರ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕೃಷ್ಣನಾಗಿ ಮಾತಿನ ಮಂಟಪಕ್ಕೆ ನಮ್ಮನ್ನು ಕರೆದೊಯ್ಯುವ ಶ್ರೀ ಪವನ್ ಕಿರಣಕೆರೆ, ಕುಂತಿಯಾಗಿ ಶ್ರೀ ಹರೀಶ್ ಬೊಳಂತಿಮೊಗರು ಈ ಪ್ರಸಂಗದ ಹೈಲೈಟ್ಸ್. ಹಿಮ್ಮೇಳದಲ್ಲಿ ಬಡಗಿನ ಪ್ರಸನ್ನ ಭಟ್ ಬಾಳ್ಕಲ್, ಅಕ್ಷಯ್ ಆಚಾರ್ಯ, ಮನೋಜ್ ಆಚಾರ್ಯ ಇರಲಿದ್ದಾರೆ. ಇನ್ನಷ್ಟು ಬೇಕಿತ್ತು ಎನ್ನುವಷ್ಟರಲ್ಲಿ ಮುಂದಿನ ಪ್ರಸಂಗಕ್ಕೆ ವೇದಿಕೆ ತೆರೆದುಕೊಳ್ಳಲಿದೆ.

ಎರಡನೇ ಪ್ರಸಂಗ ಭೀಷ್ಮ ವಿಜಯ:

ಇಲ್ಲಿ ಭೀಷ್ಮನಾಗಿ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ಅಂಬೆಯ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸುವ ಪರಿಯನ್ನು ನೋಡಬಹುದು. ಅಂಬೆಯಾಗಿ ಶ್ರೀ ವಾಸುದೇವ ರಂಗಭಟ್ಟರು ನಮ್ಮನ್ನು ಮತ್ತು ಭೀಷ್ಮನನ್ನು ಭಾವನಾತ್ಮಕವಾಗಿ, ತಾರ್ಕಿಕವಾಗಿ ಹೇಗೆ ಕಟ್ಟಿಹಾಕಬಹುದು, ಜೊತೆಯಲ್ಲಿ ಸಾಲ್ವನಾಗಿ ಜಬ್ಬಾರ್ ಸಮೋ ಅವರ ಕುತೂಹಲಕಾರಿ ಸಂಭಾಷಣೆಗೆ ಹಲವಾರು ಕಾಯುತ್ತಿದ್ದಾರೆ. ಪರಶುರಾಮನಾಗಿ ಕಲ್ಚಾರ್, ವೃದ್ಧ ಬ್ರಾಹ್ಮಣನಾಗಿ ಅವಿನಾಶ್ ಉಬರಡ್ಕ ಹೀಗೆ ಒಬ್ಬರಿಗಿಂತ ಒಬ್ಬರು ಈ ಭಾರಿಯ ಮಾತಿನ ಮಂಟಪದ ಭಾಗವಾಗಿರುವುದು ಕಲಾಭಿಮಾನಿಗಳಿಗೆ ಹಬ್ಬವೇ ಸರಿ. ಹಿಮ್ಮೇಳದಲ್ಲಿ ಬಡಗಿನ ಕಲಾಭಿಮಾನಿಗಳನ್ನು ತೆಂಕಿನೆಡೆಗೆ ಆಕರ್ಷಿಸಿದ ಶ್ರೀಮತಿ ಕಾವ್ಯಶ್ರೀ ಆಜೇರು, ಜೊತೆಗೆ ಸಾಥ್ ನೀಡಲು ಶಿಖಿನ್ ಮತ್ತು ಅಕ್ಷಯ್ ರಾವ್ ವಿಟ್ಲ.

ಭೀಷ್ಮ ವಿಜಯ ಪ್ರಸಂಗವೇ ಹಾಗೆ ತರ್ಕಿಸಿದ್ದಷ್ಟು ವಿಷಯಗಳು, ಪ್ರಶ್ನೆಗಳು ಸಾಲು ಸಾಲಾಗಿ ಕಣ್ಣು ಮುಂದೆ ಬಂದು ಹೋಗುತ್ತವೆ. ನೀವು ಒಂದಿಷ್ಟು ಕುತೂಹಲವನ್ನು ಹೊತ್ತು ತನ್ನಿ. ಖಂಡಿತಾ ಉತ್ತರ ದೊರಕೀತು. ನನ್ನಲ್ಲೂ ಹಲವು ತಾರ್ಕಿಕ ಅಂಶಗಳು ಉತ್ತರವಿಲ್ಲದೆ ಕಾಯುತ್ತಿವೆ ಅವುಗಳನ್ನು ಪಟ್ಟಿ ಮಾಡಿಯಾಗಿದೆ. ನಿಮ್ಮಲ್ಲೂ ಇದ್ದರೆ ಬನ್ನಿ. ಉತ್ತರ ಸಿಕ್ಕೀತು.

1. ಭೀಷ್ಮನು ಅಂಬೆಯನ್ನು ಅಪಹರಿಸಿದ್ದು ಧರ್ಮವೇ? ಕ್ಷತ್ರಿಯ ಸಂಪ್ರದಾಯದಲ್ಲಿ ಇದು ಸ್ವೀಕಾರಾರ್ಹವಾಗಿದ್ದರೂ, ಕನ್ಯೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡದ್ದು ನೈತಿಕವಾಗಿ ಪ್ರಶ್ನಾರ್ಹವಲ್ಲವೇ?
2. ಪ್ರತಿಜ್ಞೆಗಾಗಿ ಒಬ್ಬ ಸ್ತ್ರೀಯ ಜೀವನವನ್ನು ಬಲಿಕೊಡುವುದು ನ್ಯಾಯವೇ?
3. ಅಂಬೆಯ ಪ್ರತೀಕಾರ ಸಮಂಜಸವೇ?
4. ಭೀಷ್ಮನು ಮಹಾನ್ ಧರ್ಮಾತ್ಮನಾ ಅಥವಾ ತನ್ನ ಪ್ರತಿಜ್ಞೆಯ ಕೈದಿಯಾ?
5. ಅಂಬೆ ಅನ್ಯಾಯದ ವಿರುದ್ಧ ಹೋರಾಡಿದ ವೀರ ಮಹಿಳೆಯಾ ಅಥವಾ ಪ್ರತೀಕಾರದ ಸಂಕೇತವಾ?
6. ಭೀಷ್ಮನ ಪ್ರತಿಜ್ಞೆ ಮಹತ್ವದ್ದೇ ಆದರೆ ಅಂಬೆಯ ಕಣ್ಣೀರಿಗೆ ಉತ್ತರವೇನು?
7. ಒಂದು ಮದುವೆ ಮಾಡಲು ತೆಗೆದುಕೊಂಡ ಪ್ರತಿಜ್ಞೆ ಮತ್ತೊಂದು ಮದುವೆಮಾಡಿಸಲು ತೊಡಕಾದಾಗ ಕಳುಹಿಸಿಕೊಟ್ಟದ್ದು ಎಷ್ಟು ಸರಿ?

ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಉತ್ತರದ ನಿರೀಕ್ಷೆಯಲ್ಲಿ ನೀವೆಲ್ಲರೂ ಬನ್ನಿ. ಪ್ರೋತ್ಸಾಹಿಸಿ.