ಬೌಂಡರಿಗಳಲ್ಲಿ ಸೂರ್ಯವಂಶಿ, ಭಾವಭಾವನೆಗಳಲ್ಲಿ ಆತ್ರೇಯ: ಭವಿಷ್ಯದ ಉಜ್ವಲ ತಾರೆಗಳು🇮🇳

ಇಂದು U19 ವರ್ಲ್ಡ್ ಕಪ್ ಫೈನಲ್ ನೋಡುತ್ತಾ ಮನಸ್ಸೇ ಬೆರಗಾಯಿತು.
14 ವರ್ಷದ ಈ ಬಾಲಕನ ಆಟಕ್ಕೆ ಇಂಗ್ಲೆಂಡ್ ತಂಡದವರು ಹಣ್ಣುಗಾಯಿ–ನೀರುಗಾಯಿ ಆಗಿ ಹೋಗಿದ್ದರು.
ಕೇವಲ 80 ಎಸೆತಗಳಲ್ಲಿ 175 ರನ್. 15 ಫೋರ್, 15 ಸಿಕ್ಸ್. ಹಾಕಿದ ಪ್ರತಿಯೊಂದು ಬಾಲ್ ಕೂಡ ಬೌಂಡರಿ ದಾಟುವ ಹಠದಲ್ಲೇ ಇದ್ದಂತಿತ್ತು.

ಇದು ಕೇವಲ ಒಂದು ಇನ್ನಿಂಗ್ಸ್ ಅಲ್ಲ.
ಇದು ಭಾರತೀಯ ಕ್ರಿಕೆಟ್ ಭವಿಷ್ಯದ ಘೋಷಣೆ.
ಈ ಅದ್ಭುತ ಪ್ರತಿಭೆ ಭಾರತದ ಹೆಮ್ಮೆಯ ಕುವರ.
ಆತನ ಕ್ರಿಕೆಟ್ ವೈಭವ ಇನ್ನಷ್ಟೇ ಆರಂಭವಾಗಿದೆ,
ಕಾರಣ ಅವನಿಗೆ ಇನ್ನೂ ಹದಿನಾಲ್ಕೇ ವರ್ಷ.
ಬಿಹಾರದ ಮಿಥಿಲಾ ನಗರದಲ್ಲಿ ಜನಿಸಿದ ಈ ಬಾಲಕ
ಸೀತಾಮಾತೆಯ ಜನ್ಮಭೂಮಿಯಲ್ಲಿ ಹುಟ್ಟಿ,
ಕ್ರಿಕೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ.

“ಭಾರತೀಯ ಕ್ರಿಕೆಟ್ ಟೀಮ್‌ನಲ್ಲಿ ಈತನಿದ್ದರೆ?”
ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.
ಆದರೆ ಆ ಕನಸನ್ನು ಸಾಕಾರಗೊಳಿಸಲು
ಇನ್ನೂ ಕೆಲವು ತಿಂಗಳುಗಳ ಕಾಲ ನಾವು ಕಾಯಲೇಬೇಕು.
ICC ನಿಯಮಗಳ ಪ್ರಕಾರ ಕನಿಷ್ಠ 15 ವರ್ಷಗಳಾದಾಗ ಮಾತ್ರ.
ಆದರೆ ಅವನ ಪ್ರತಿಭೆ ಈಗಲೇ ಎಲ್ಲ ಗಡಿಗಳನ್ನು ದಾಟಿದೆ.

...................................................................................

ಇದಕ್ಕಿಂತಲೂ ಇನ್ನೊಂದು ಸಂತಸದ ಸಂಗತಿ ನಮ್ಮೊಳಗೇ ಇದೆ.
ನಾವು ಹೃದಯದಿಂದ ಪ್ರೀತಿಸುವ ಕರಾವಳಿಯ ಗಂಡುಕಲೆ - ಯಕ್ಷಗಾನ.

ಇವನು ಕೇವಲ 7 ವರ್ಷದ ಅದ್ಭುತ ಬಾಲಕ.
ಅಭಿಮನ್ಯು ಆಗಲಿ, ಮನ್ಮಥ ಆಗಲಿ, ಕೃಷ್ಣನಾಗಲಿ, ಪ್ರಹ್ಲಾದನಾಗಲಿ, ಯಾವ ವೇಷ ಕೊಟ್ಟರೂ ಲೀಲಾಜಾಲವಾಗಿ ಜೀವ ತುಂಬುವ ಚೈತನ್ಯ. ಅವನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅತ್ರೇಯ ಗಾವಂಕರ್.

ಈ ವಯಸ್ಸಿನಲ್ಲೇ ಹಿರಿಯ ಕಲಾವಿದರೊಂದಿಗೆ ರಂಗವನ್ನು
ಹಂಚಿಕೊಳ್ಳುತ್ತಿರುವುದು ಸಾಧಾರಣ ವಿಷಯವಲ್ಲ.
ಆತನ ನಾಟ್ಯ, ಚಾಲು, ಚಿಕ್ಕದಾದರೂ ಚೊಕ್ಕವಾದ ಮಾತುಗಳು
ನೋಡುತ್ತಿರುವ ಪ್ರತಿಯೊಬ್ಬರ ಹೃದಯವನ್ನು ತಟ್ಟುತ್ತವೆ.

ನೋಡಿದಾಗ ಅನಿಸುತ್ತದೆ. ಈ ಬಾಲಕ ಹುಟ್ಟುವಾಗಲೇ ಕಲೆಯ ವರದಾನವನ್ನು ಹೊತ್ತು ತಂದಿದ್ದಾನೆ ಎಂದು. ಯಕ್ಷಲೋಕದ ಅನರ್ಘ್ಯ ರತ್ನವೆಂದು ಹೇಳಿದರೂ ಅತಿಶಯೋಕ್ತಿ ಅಲ್ಲ.

ಒಬ್ಬನು ಕ್ರಿಕೆಟ್ ಮೈದಾನದಲ್ಲಿ,
ಇನ್ನೊಬ್ಬನು ಯಕ್ಷರಂಗದಲ್ಲಿ...!
ಎರಡು ವಿಭಿನ್ನ ಕ್ಷೇತ್ರಗಳು, ಆದರೆ ಪ್ರತಿಭೆಯ ಉಜ್ವಲ ಬೆಳಕು ಒಂದೇ.

ಇಬ್ಬರೂ ಭವಿಷ್ಯದ ತಾರೆಗಳು.
ಇಬ್ಬರ ಕನಸುಗಳು ಇನ್ನೂ ಎತ್ತರಕ್ಕೆ ಹಾರಲಿ.
ಇಬ್ಬರ ಬದುಕು ಸದಾಕಾಲ ಉಜ್ವಲವಾಗಿರಲಿ.

-ಪಿ.ಕೆ. ಜೈನ್ ಚಪ್ಪರಿಕೆ