ಮಳೆಗಾಲದ ಸನಿಹ ಬಂದಾಯ್ತು. ದಿಗ್ವಿಜಯ ಹೊರಟ ಮೇಳಗಳು ಸೇವೆಯಾಟದ ದಿನಕ್ಕೆ ಹತ್ತಿರ ಬಂದಾಯ್ತು. ಹೊರಡುವಾಗ ಒಂದಿಷ್ಟು ಮೇಳಗಳು ಹೊಸ ಪ್ರಸಂಗಗಳ ಆಯ್ಕೆ ಮಾಡಿಕೊಂಡು ಪ್ರದರ್ಶನಕ್ಕೆ ಅಣಿಯಾಗುವುದು, ಅವುಗಳಲ್ಲಿ ಬಹಳಷ್ಟು ಸಾಮಾಜಿಕ ಒಂದಿಷ್ಟು ಪೌರಾಣಿಕ. ಆದರೆ ಈ ಸಾಲಿನ ತಿರುಗಾಟದಲ್ಲಿ ಕೆಲವೊಂದು ಸಾಮಾಜಿಕ ಪ್ರಸಂಗಗಳು 'ಸೂಪರ್ ಹಿಟ್' ಎಂದು ತನ್ನ ಆರಂಭದ ಪ್ರದರ್ಶನಗಳಲ್ಲಿ ಹೆಗ್ಗಳಿಕೆಯನ್ನು ಪಡೆದುಕೊಂಡು ಬಿಟ್ಟವು! ಆದರೆ ಇದು ನಿಜನಾ?
ಸೂಪರ್ ಹಿಟ್ ಪ್ರಸಂಗ ಎಂದು ಹೇಳುವುದು ಯಾರು? ಕಲಾವಿದರೋ, ಸಂಘಟಕರೋ, ಮೇಳದ ಯಜಮಾನರೋ, ಪ್ರದರ್ಶನವನ್ನು ಕಂಡ ಪ್ರೇಕ್ಷಕರೋ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ಯೂಟ್ಯೂಬರ್ಸ್ ಗಳೋ?
ಮೊದಲ ವಾರದ ಪ್ರದರ್ಶನಗಳಲ್ಲಿಯೇ 'ಸೂಪರ್ ಹಿಟ್' ಆಯಿತು ಅಂತಾದರೆ ಇದರಲ್ಲಿ ಪ್ರೇಕ್ಷಕರ ಪಾತ್ರ ಮತ್ತು ಸಾಮಾಜಿಕ ಮಾಧ್ಯಮದವರ ಪಾತ್ರ ಎಷ್ಟು ಮಹತ್ವದ್ದು ?
ಮೇಳ ಹೊರಟಾಗ ತಮ್ಮದೊಂದು ಪ್ರಸಂಗ ಮೇಲಾಕಿ ಎಂದು ಯೂಟ್ಯೂಬರ್ಸ್ ಗಳನ್ನ ಕೇಳುವುದು ಸಾಮಾಜಿಕ ಪ್ರಸಂಗಗಳ ಅವಲಂಬಿತ ಮೇಳಗಳಲ್ಲಿ ಇದೆ. ಮೇಳದ ಮ್ಯಾನೇಜರ್ ಸಹ ಕೇಳಿಕೊಳ್ಳುವುದು ಉಂಟು. ನಂತರದಲ್ಲಿ ಅವರನ್ನೇ ದೂರವಿರಿಸುವ ಕ್ರಮವೂ ಇದೆ. ಇದೆಷ್ಟು ಸರಿ?
ಇನ್ಫ್ಲ್ಯೂನ್ಸರ್ ಗಳ ಅವಶ್ಯಕತೆ ಎಂಬುದು ಆರಂಭದ ದಿನಗಳಲ್ಲಿ ಪ್ರತಿ ಮೇಳಕ್ಕೂ ಹೊಸ ಪ್ರಸಂಗಗಳ ಪ್ರದರ್ಶನಕ್ಕೆ ಅವಶ್ಯಕ. ಅತಿ ಕಡಿಮೆ ಫಲಾಫೇಕ್ಷೆಯಲ್ಲಿ ಕಲೆ, ಕಲಾವಿದ, ಮೇಳದ ಮೇಲಿನ ಅಭಿಮಾನದಿಂದ ಒಂದಿಷ್ಟು ಹೆಚ್ಚು ಫಾಲೋವರ್ಸ್ ಹೊಂದಿರುವ ಯೌಟ್ಯುಬರ್ಸ್ ಗಳು ನಿದ್ದೆ ಬಿಟ್ಟು ಪ್ರದರ್ಶನದ ಸ್ಥಳಕ್ಕೆ ಹೋಗಿ ಇಡೀ ಪ್ರಸಂಗದ ಒಂದೇರಡು ಚಿಕ್ಕ ತುಣುಕುಗಳನ್ನು (ವೈರಲ್ ಕಂಟೆಂಟ್) ಹುಡುಕಿ ತನ್ನ ಚಾನೆಲ್ ಗೆ ಹಾಕಿ ಅದಕ್ಕೆ ಭಯಂಕರ ಟೈಟಲ್ ಗಳನ್ನೂ ಕೊಟ್ಟು ಎಂತವರು ಸಹಾ ಇದೊಂದು ಪ್ರಸಂಗ ನೋಡಲೇಬೇಕು ಎಂಬಂತೆ ಮಾಡುತ್ತಾರೆ. ಇದರ ಫಲಶ್ರುತಿ ಅತಿ ಹೆಚ್ಚು (ಶೇಕಡಾ 90%ಕ್ಕೂ ಹೆಚ್ಚು) ಪಡೆದುಕೊಳ್ಳುವುದು ಮೇಳ, ಕಲಾವಿದ ಹೊರತು ಯೌಟ್ಯುಬರ್ ಅಲ್ಲವೇ ಅಲ್ಲ. ಉದಾಹರಣೆಗೆ: 1 ಲಕ್ಷ ಫಾಲೋವರ್ ಇರುವ ಒಂದು ಚಾನೆಲ್ ಒಂದೆರಡು ನಿಮಿಷದ ರೀಲ್ಸ್ ಅನ್ನು ಒಕ್ಕಣೆ ಸೇರಿಸಿ ಹಾಕಿದಾಗ 1 ಲಕ್ಷ ವಿವ್ಸ್ ಆಯಿತು ಎಂದಿಟ್ಟುಕ್ಕೊಳ್ಳಿ. ಇದರಿಂದ ವಿಡಿಯೋ ಹಾಕಿದವನಿಗೆ ಸಿಗುವುದು ಹೆಚ್ಚೆಂದರೆ 10-15 ಹೊಸ ಫಾಲೋವರ್ಸ್, ಜೊತೆಗೆ 20-25 ರೂಪಾಯಿಗಳು. ಆದರೆ ಮೇಳಕ್ಕೆ ಎಷ್ಟು? ಒಂದಿಷ್ಟು ಆಟದ ಬುಕಿಂಗ್ ಗಳು, ಅದೇ ಪ್ರಸಂಗ ನೋಡಬೇಕೆನ್ನುವ ಪ್ರೇಕ್ಷಕ ವರ್ಗ, ಜೊತೆಗೆ ಹೆಚ್ಚಾಗುವ ಕಲಾವಿದನ ಕೀರ್ತಿ. ಅಂದರೆ ಶೇಕಡಾ 90% ಕ್ಕೂ ಹೆಚ್ಚು ಪಾಲು ಮೇಳಕ್ಕೆ ಆಯಿತಲ್ಲವೇ? ಹೀಗಿರುವಾಗ ತಿರುಗಾಟದ ಕೊನೆಯಲ್ಲಿ ಅದೇ ಯೂಟ್ಯೂಬರ್ಸ್ ಗಳನ್ನೂ ಮೇಳ ತಡೆ ಹಿಡಿಯಲು ಪ್ರಾರಂಭಿಸುತ್ತದೆ. ಕಾರಣ ಮಾತ್ರ ವಿಚಿತ್ರ. ಪ್ರಸಂಗ 'ಸೂಪರ್ ಹಿಟ್' ಆಗಿದೆ. ಹಾಗಾಗಿ ಯಾರು ವಿಡಿಯೋ ಮಾಡುವ ಹಾಗಿಲ್ಲ. ವಿಡಿಯೋ ಮಾಡಿದ್ರೆ ಆಟ ನಿಲ್ಲಿಸ್ತೇವೆ. ಅಂದರೆ ಇವರ ಈ 'ಸೂಪರ್ ಹಿಟ್' ಅವರ ಪ್ರಸಂಗದ ಹಿಂದೆ ಬರಲು ಸಹಕರಿಸಿದ ಮಾಧ್ಯಮ ಮಿತ್ರರು ಬೇಡವಾಗಿ ಕಾಣಿಸ್ತಾರೆ. ಹಾಗೆಯೆ ಹಿಂದೆಲ್ಲ ಸೆಟ್ಟಿಂಗ್ ಕೆಲಸ ಮಾಡುವ ಕಾಲವೊಂದಿತ್ತು. ಧಾರೇಶ್ವರರು, ನಾವಡರು ಹೀಗೆ ಸಾಮಾಜಿಕ ಮಾಧ್ಯಮವೇ ಇಲ್ಲದ ಕಾಲದಲ್ಲಿ ಕೇವಲ ಬಾಯಿ ಪ್ರಚಾರ ಗಿಟ್ಟಿಸಿಕೊಂಡ ಸೆಟ್ಟಿಂಗ್. ಆದರೆ ಇಂದಿನ ಕಾಲಘಟ್ಟದಲ್ಲಿ ಸೆಟ್ಟಿಂಗ್ ನಿಂದ ಆಚೆಯೂ ಜನರನ್ನು ಸೆಳೆಯಬಲ್ಲ ಸಾಮಾಜಿಕ ಮಾಧ್ಯಮದವರ ಕೊಡುಗೆ ತಿರುಗಾಟದ ಕೊನೆಯಲ್ಲಿ ಕೆಲವು ಮೇಳಗಳಿಗೆ ಅವಶ್ಯಕತೆ ಇಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ.
ಯೂಟ್ಯೂಬರ್ಸ್ ಗಳಿಗೆ ಕಿವಿಮಾತು.
ದಯವಿಟ್ಟು ಈ ಹೊಸ ಸಾಮಾಜಿಕ ಪ್ರಸಂಗಗಳಿಗೆ ಪ್ರಚಾರ ಕೊಡಲು ಹೋಗಲೇಬೇಡಿ. ಮತ್ತೆ ಈ 'ಸೂಪರ್ ಹಿಟ್', 'ಕಿಕ್ಕಿರಿದ ಜನಸಾಗರ', 'ಜನಮನ ಗೆದ್ದ' 'ಜುಗಲ್', 'ಸಾಥ್' ಅದು ಇದು ಏನೇನೋ ಸೇರಿಸಲು ಹೋಗಬೇಡಿ. ಯಕ್ಷಗಾನಕ್ಕೆ ತನ್ನದೇ ಆದ ಕೋರ್ ವಿಮರ್ಶಕರಿದ್ದಾರೆ, ಪ್ರೇಕ್ಷಕವರ್ಗವಿದೆ. ಅವರಿಗೆ ಬಿಟ್ಟುಬಿಡಿ. ಮತ್ತೆ ಎಲ್ಲಿಯಾದರೂ 'ಸೂಪರ್ ಹಿಟ್' ಆದರೆ ನಿಮ್ಮನ್ನೇ ದೂರವಿರಿಸುತ್ತಾರೆ ಎಚ್ಚರದಿಂದಿರಿ!
ಆದರೂ ನೀವು ಪ್ರಚಾರ ಮಾಡಲೇಬೇಕು ಎಂದುಕೊಂಡಿದ್ದರೆ ವಸ್ತುನಿಷ್ಠ ಅಭಿಪ್ರಾಯವನ್ನು ಮಂಡಿಸಿ. ಯಾವುದು ಯಕ್ಷಗಾನಿಯವಲ್ಲವೋ ಅದನ್ನು ಜನತೆಗೆ ತೋರಿಸಿ ಯಕ್ಷಗಾನಕ್ಕೆ ಇವೆಲ್ಲ ಬೇಕಾ ಎಂದು ಪ್ರಶ್ನಿಸಿ. ಖಂಡಿತ ಬದಲಾವಣೆ ಸಾಧ್ಯ.
-ಪಿ.ಕೆ. ಜೈನ್ ಚಪ್ಪರಿಕೆ
General
ಸೂಪರ್ ಹಿಟ್ v/s ಯೂಟ್ಯೂಬರ್ಸ್