ಕಲಾಕ್ಷೇತ್ರದಲ್ಲಿ ಸಂಪನ್ನಗೊಂಡ "ಪಂಜರಪಕ್ಷಿ" – ನನ್ನ ಅನಿಸಿಕೆ

ಮೊದಲಾರ್ಧ, ಅಂದರೆ ಸುಮಾರು ಎರಡೂವರೆ ಗಂಟೆಗಳವರೆಗೆ ಪ್ರಸಂಗ ಸ್ವಲ್ಪ ನೀರಸವಾಗಿತ್ತು. ಇತ್ತೀಚಿನ ಸಾಮಾಜಿಕ ಪ್ರಸಂಗಗಳಂತೆ ಪ್ರೀತಿ–ಪ್ರೇಮ, ಮೋಸ–ವಂಚನೆ ಇವುಗಳ ಸುತ್ತ ಕಥೆಗೆ ಬುನಾದಿ ಹಾಕುವ ಪ್ರಯತ್ನ ಕಂಡುಬಂತು. ಹಾಸ್ಯ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸಲಿಲ್ಲ; ಅಲ್ಲದೆ ಕಳೆದ ಒಂದು ವರ್ಷದ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದಂತಿರುವುದರಿಂದ ಅಷ್ಟಾಗಿ ಮನಸ್ಸಿಗೆ ಹಿಡಿಸಲಿಲ್ಲ.

ಆದರೆ ದ್ವಿತೀಯಾರ್ಧ ಸಂಪೂರ್ಣವಾಗಿ ವಿಭಿನ್ನ ಅನುಭವ ನೀಡಿತು. ಕಲಾವಿದರ ಹೊಂದಾಣಿಕೆ, ಡೇರೆ ಮೇಳದ ಅನುಭವವಿರುವ ಕಲಾವಿದರ ಮಹಾಸಂಗಮ ಹಾಗೂ ಒಂದಕ್ಕೊಂದು ಪೂರಕವಾಗಿ ಬಂದ ಸನ್ನಿವೇಶಗಳು ಕಥೆಯನ್ನು ಪರಿಣಾಮಕಾರಿಯಾಗಿ ಮುಂದಕ್ಕೆ ಕೊಂಡೊಯ್ದವು. ಒಟ್ಟಾರೆಯಾಗಿ ಹೇಳುವುದಾದರೆ, ಮೊದಲಾರ್ಧ ಬಯಲಾಟ ಮೇಳದ ಸೊಗಡನ್ನು ನೀಡಿದರೆ, ದ್ವಿತೀಯಾರ್ಧ ಡೇರೆ ಮೇಳದ ರಂಗವನ್ನು ಕಟ್ಟಿಕೊಟ್ಟು ಪ್ರಸಂಗಕ್ಕೆ ನ್ಯಾಯ ಒದಗಿಸಿದೆ ಎನ್ನಬಹುದು.

ಆದರೆ ಕೊನೆಯ ಮೂರು ಸನ್ನಿವೇಶಗಳಲ್ಲಿ ಕಥೆಯ ಅಂತಃಸತ್ವಕ್ಕೆ ಇನ್ನಷ್ಟು ಜೀವ ತುಂಬುವ ಅವಕಾಶ ಇತ್ತು ಎಂಬ ಭಾವನೆ ಮೂಡಿತು. ಬಿಲ್ಲಾಡಿ ಪದ್ಯವನ್ನು ಕಾತರದಿಂದ ಕಾಯುತ್ತಿದ್ದವರಿಗೆ ಧ್ವನಿ ವ್ಯವಸ್ಥೆ (Sound System) ಅಷ್ಟಾಗಿ ಪೂರಕವಾಗಲಿಲ್ಲ.

ಅಕ್ಷಯ್, ಸುಜನ್, ತೊಂಬಟ್ಟು , ಉಪ್ಪೂರು ಹಾಗೂ ಅಮಾಸೆಬೈಲ್ ಅವರ ನೆಕ್ಸ್ಟ್ ಲೆವೆಲ್ ಪ್ರಯತ್ನ ಸ್ಪಷ್ಟವಾಗಿ ಗೋಚರಿಸಿತು. ಒಟ್ಟಿನಲ್ಲಿ, ಕೊನೆಯವರೆಗೂ ಕುಳಿತು ಸಂಪೂರ್ಣ ಆಟವನ್ನು ಆಸ್ವಾದಿಸಿದರೆ ಮನೋರಂಜನೆ ಖಂಡಿತ. ಮಧ್ಯದಲ್ಲೇ ಎದ್ದು ಹೋದರೆ. "ನೋ ರಂಜನೆ ಗ್ಯಾರಂಟಿ!"

ಪ್ರಸಂಗ: ಪ್ರೊ. ಪವನ್ ಕಿರಣಕೆರೆ ವಿರಚಿತ ಪಂಜರಪಕ್ಷಿ
ಮೇಳ: ಹಾಲಾಡಿ ಮೇಳ
ಪ್ರದರ್ಶನವಾದ ದಿನಾಂಕ: 27-06-2026
ನಡೆದ ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.