ನಾಗವಲ್ಲಿ ಮತ್ತೆ ಕಲಾಕ್ಷೇತ್ರದಲ್ಲಿ... ಹಳೆಯ ನೆನಪುಗಳೊಂದಿಗೆ ಹೊಸ ನಿರೀಕ್ಷೆ:
ಮನೋಜ್ ಭಟ್ ಹೆಗ್ಗಾರಳ್ಳಿ ಅವರ ಸಂಯೋಜನೆಯಲ್ಲಿ, ಧಾರೇಶ್ವರ ಅವರ ನೆನಪಿನ ಅಂಗವಾಗಿ ನಾಗವಲ್ಲಿ ಯಕ್ಷಗಾನ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಆಯೋಜನೆಗೊಂಡಿದೆ. ಹಿಂದಿನ ವೈಭವವನ್ನು ಮತ್ತೊಮ್ಮೆ ಮರುಕಳಿಸುವ ಪ್ರಯತ್ನ ನಡೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಅದ್ಭುತ ಸಂಯೋಜನೆ ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಭರವಸೆ ಮೂಡಿಸಿದೆ.
ನಾನು ಚಿಕ್ಕವನಿದ್ದಾಗ ಇದೇ ರೀತಿಯ ರಂಗಸಂಯೋಜನೆಯಲ್ಲಿ ಅರೆಹೊಳೆಯಲ್ಲಿ ನೋಡಿದ ನೆನಪು ಇನ್ನೂ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ಆ ಅವಳಿ ರಂಗಸ್ಥಳ, ವಿಶಿಷ್ಟ ವೇದಿಕೆ ವಿನ್ಯಾಸ, ಬೆಳಕು-ನೆರಳಿನ ಆಟ ಮತ್ತು ಪ್ರದರ್ಶನದ ಭವ್ಯತೆ ಇಂದಿಗೂ ಕಣ್ಮುಂದೆ ಮೂಡುತ್ತದೆ.
ಆ ಕಾಲದ ಅನೇಕ ಹಿರಿಯ ಕಲಾವಿದರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕಲಾಸೇವೆ, ಪರಿಶ್ರಮ ಮತ್ತು ಕೊಡುಗೆ ಎಂದೆಂದಿಗೂ ಸ್ಮರಣೀಯ. ವಿಶೇಷವಾಗಿ ಧಾರೇಶ್ವರ, ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಕಣ್ಣಿಮನೆ (ಅತಿಥಿ ಕಲಾವಿದರಾಗಿ ಆಗಮಿಸುತ್ತಿದ್ದವರು), ಅವರ್ಸೆ ಉದಯ ಹಾಗೂ ಕೋಟ ಮಹೇಶ್ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲೇಬೇಕು.
ಅಂದು ನಾಗವಲ್ಲಿಯ ಯಶಸ್ಸಿನ ಹಿಂದೆ ಪ್ರತಿಯೊಬ್ಬ ಕಲಾವಿದರ ಬೆವರು ಇತ್ತು. ಧಾರೇಶ್ವರರ ರಂಗಸಂಯೋಜನೆಯೇ ಮಾತಾಡುತ್ತಿತ್ತು. ಪ್ರಸಂಗಕರ್ತರಾದ ದೇವದಾಸ ಈಶ್ವರ ಮಂಗಲರ ಸಾಹಿತ್ಯದ ಕೊಡುಗೆ ಪ್ರದರ್ಶನಕ್ಕೆ ವಿಶಿಷ್ಟ ಮೆರುಗು ನೀಡುತ್ತಿತ್ತು.
ಜೊತೆಗೆ ತುಂಬ್ರಿ ಭಾಸ್ಕರ, ಜನಾರ್ದನ ಗುಡಿಗಾರ್, ತೊಂಬಟ್ಟು, ಉಳ್ಳೂರು ಶಂಕರ ದೇವಾಡಿಗ, ಬೀಜಮಕ್ಕಿ ವಿಜಯ ಗಾಣಿಗ, ಗಣೇಶ್ ಶಂಕರನಾರಾಯಣ, ಕಿರಾಡಿ ಸೇರಿದಂತೆ ಎಲ್ಲರೂ ಅಂದಿನ ಕಾಲದಲ್ಲಿ ಪ್ರಸಂಗಕ್ಕೆ ಜೀವ ತುಂಬಿರುವ ಕಲಾವಿದರು. ಉಳಿದ ಕಲಾವಿದರನ್ನು ನಾಳೆಯ ಪ್ರದರ್ಶನದಲ್ಲೇ ನಾವು ಕಣ್ತುಂಬಿಕೊಳ್ಳಬಹುದು.
ಅಂದು ಸೀತಾರಾಮ್ ಕುಮಾರ್ ಕಟೀಲ್ ಅವರು ಮಂತ್ರವಾದಿ ಪಾತ್ರದ ಜೊತೆಗೆ ಮುಂಡಾಸು ವೇಷದ ರಾಜ ಪಾತ್ರವನ್ನೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಈ ಬಾರಿಯೂ ಅವರು ಸಂಯೋಜನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಮತ್ತೊಮ್ಮೆ ಆ ಎರಡು ಪಾತ್ರಗಳನ್ನು ಅವರಿಂದಲೇ ನೋಡುವ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.
ಈ ಪ್ರಸಂಗದ ಅನೇಕ ಅಮರ ಪದ್ಯಗಳನ್ನು ನಾಗವಲ್ಲಿ ಧಾರೇಶ್ವರರೇ ರಚಿಸಿದ್ದರೆಂದು ಕೇಳಿದ್ದೇನೆ. "ನಿಷಿಯ ಕಾಲ...", "ಇತ್ತ ನೋಡು ಬಾ ತ್ರಿವೇಣಿ..." ಮುಂತಾದ ಪದ್ಯಗಳು ಕೇಳಿಬಂದಾಗಲೆಲ್ಲ ಧಾರೇಶ್ವರರ ನೆನಪು ಸಹಜವಾಗಿಯೇ ಮನಸ್ಸನ್ನು ಆವರಿಸುತ್ತದೆ.
ಅಂದಿನ ಪ್ರದರ್ಶನದಲ್ಲಿ ನರ್ತಕನ ಪಾತ್ರದಲ್ಲಿ ತೊಂಬಟ್ಟು ಅವರು ನೀಡಿದ ಅಭಿನಯ ಇನ್ನೂ ನೆನಪಿನಲ್ಲಿದೆ. ಈ ಬಾರಿ ಅವರ ಅನುಪಸ್ಥಿತಿ ಕಾಡದಂತೆ ಆ ಪಾತ್ರಕ್ಕೆ ಜೀವ ತುಂಬುವ ಕಲಾವಿದ ಯಾರು ಎಂಬ ನಿರೀಕ್ಷೆಯೂ ಸಹಜವಾಗಿದೆ.
ನಾಗವಲ್ಲಿ ಮತ್ತು ರವೀಂದ್ರ ಕಲಾಕ್ಷೇತ್ರ:
ಪ್ರತಿದಿನ ಬಯಲು ಪ್ರದೇಶಗಳಲ್ಲಿ ಅವಳಿ ರಂಗಸ್ಥಳವನ್ನು ನಿರ್ಮಿಸುವುದೇ ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ, ಅದೇ ವಿನ್ಯಾಸವನ್ನು ರವೀಂದ್ರ ಕಲಾಕ್ಷೇತ್ರದಂತಹ ಒಳಾಂಗಣ ರಂಗಮಂದಿರದಲ್ಲಿ ಅಳವಡಿಸುವುದು ಇನ್ನೂ ದೊಡ್ಡ ಸವಾಲಾಗಿತ್ತು ಎಂದು ಧಾರೇಶ್ವರರು ಒಮ್ಮೆ ನೆನಪಿಸಿಕೊಂಡಿದ್ದರು. ಆದರೆ ಅಂದಿನ ಕಲಾಕ್ಷೇತ್ರದ ಸಿಬ್ಬಂದಿ, ವಿಶೇಷವಾಗಿ ಈಶ್ವರ ಆಚಾರ್ ಮತ್ತು ಅವರ ಸಹೋದ್ಯೋಗಿಗಳು ನೀಡಿದ ಸಹಕಾರದಿಂದ ಅದು ಯಶಸ್ವಿಯಾಗಿ ಸಾಧ್ಯವಾಯಿತು ಎಂದು ಅವರು ಸಂತೋಷದಿಂದ ಹೇಳುತ್ತಿದ್ದರು.
ಹಿಂದೆ ರವೀಂದ್ರ ಕಲಾಕ್ಷೇತ್ರವನ್ನು ರಂಜಿಸಿದ್ದ ನಾಗವಲ್ಲಿ ಮತ್ತೆ ಅದೇ ರಂಗಮಂದಿರಕ್ಕೆ ಕಾಲಿಡುತ್ತಿದೆ. ಇದು ಕೇವಲ ಒಂದು ಪ್ರದರ್ಶನವಲ್ಲ; ಒಂದು ಸುವರ್ಣಯುಗದ ನೆನಪುಗಳನ್ನು ಮರುಜೀವಗೊಳಿಸುವ ಸಾಂಸ್ಕೃತಿಕ ಸಂಭ್ರಮ.
ಹಳೆಯ ನೆನಪುಗಳನ್ನು ಹೊತ್ತು, ಹೊಸ ಅನುಭವಗಳ ನಿರೀಕ್ಷೆಯೊಂದಿಗೆ ಎಲ್ಲಾ ಕಲಾಭಿಮಾನಿಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾಗೋಣ. ನಾಗವಲ್ಲಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳೋಣ. ಈ ಪ್ರದರ್ಶನ ಮತ್ತೆ ಮತ್ತೆ ನೋಡುವಂತಾಗಲಿ, ಹೊಸ ಪೀಳಿಗೆಗೂ ಪ್ರೇರಣೆಯಾಗಲಿ.
ಶುಭವಾಗಲಿ...!
– ಪಿ. ಕೆ. ಜೈನ್, ಚಪ್ಪರಿಕೆ
General
ನಾಗವಲ್ಲಿ ಮತ್ತೆ ಕಲಾಕ್ಷೇತ್ರದಲ್ಲಿ... ಹಳೆಯ ನೆನಪುಗಳೊಂದಿಗೆ ಹೊಸ ನಿರೀಕ್ಷೆ: